ಕ್ಷೇತ್ರಕಾರ್ಯ

ಜನರನ್ನು, ಅವರ ಆರ್ಥಿಕ ಸಾಮಾಜಿಕ ವ್ಯವಸ್ಥೆಗಳನ್ನು, ಸಂಸ್ಕøತಿಯನ್ನು ಕುರಿತಂತೆ ಅವರ ಸಹಜ ನೆಲೆಯಲ್ಲಿ ನಡೆಸುವ ಅಧ್ಯಯನ (ಫೇಲ್ಡ್ ವರ್ಕ್). ಸಮಾಜದ ಅಖಂಡ ದೃಷ್ಟಿಯನ್ನು ಪಡೆಯುವ ಉದ್ದೇಶದಿಂದ ನಡೆಸುವ ಸಮಾಜ ವೀಕ್ಷಣೆ, ಅಂತರಂಗವನ್ನರಿಯುವ ಪ್ರಯತ್ನ. ಮಾನವ ಜೀವಿಯನ್ನು ಪರೀಕ್ಷೆಗೆ ಒಡ್ಡುವ ಜೀವವಿಜ್ಞಾನಿಯಂತೆ ಸಮಾಜವಿಜ್ಞಾನಿ ಸಮಾಜವನ್ನು ವೀಕ್ಷಣೆಗೆ ಒಳಪಡಿಸುತ್ತಾನೆ. ಸಮಾಜವೇ ಅವನಿಗೆ ಅಣಿಯಾಗಿ ಒದಗಿಬರುವ ಪ್ರಯೋಗಾಲಯ.
ಸಾಂಸ್ಕøತಿಕ ಮಾನವಶಾಸ್ತ್ರಜ್ಞರು ಬಹಳ ಮಟ್ಟಿಗೂ ಸಮಾಜ ಶಾಸ್ತ್ರಜ್ಞರು ಸ್ವಲ್ಪ ಮಟ್ಟಿಗೂ ಕ್ಷೇತ್ರಾಧ್ಯಯನ ಮಾರ್ಗವನ್ನು ಹಿಂದಿನಿಂದಲೂ ಅನುಸರಿಸುತ್ತ ಬಂದಿದ್ದಾರೆ. ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮುಂತಾದ ಸಮಾಜವಿಜ್ಞಾನ ಕ್ಷೇತ್ರಗಳಲ್ಲೂ ಇದು ಹೆಚ್ಚಾಗಿ ಅನುಷ್ಠಾನಕ್ಕೆ ಬರುತ್ತಿದೆ. ಕ್ಷೇತ್ರಕಾರ್ಯದ ಇತಿಹಾಸ, ಅದು ತಂದೊಡ್ಡುವ ಸಮಸ್ಯೆಗಳು, ಅದನ್ನು ಅನುಸರಿಸುವ ವಿಧಾನ-ಈ ವಿಚಾರಗಳಲ್ಲಿ ಮಾನವಶಾಸ್ತ್ರಕ್ಕೂ ಸಮಾಜಶಾಸ್ತ್ರವೇ ಮುಂತಾದ ಶಾಸ್ತ್ರಗಳಿಗೂ ವ್ಯತ್ಯಾಸವುಂಟು. ಆದರೆ ಈಚೆಗೆ ಈ ವ್ಯತ್ಯಾಸ ಕಡಿಮೆಯಾಗುತ್ತಿದೆ.

ಸಮಾಜಶಾಸ್ತ್ರಗಳ ಅಧ್ಯಯನದಲ್ಲಿ ಗಣಿತಶಾಸ್ತ್ರ ಮತ್ತು ಸಂಖ್ಯಾಕಲನಶಾಸ್ತ್ರಗಳ ಉಪಯೋಗ ಹೆಚ್ಚಾಗುತ್ತಿದೆ. ವಿಷಯ ಸಂಗ್ರಹಣ ವಿಧಾನದಲ್ಲಿಯೂ ಹಲವು ಮಾರ್ಪಾಡುಗಳಾಗಿವೆ. ಸಮೀಕ್ಷೆ ಹಾಗೂ ಕ್ಷೇತ್ರ ಅಧ್ಯಯನಗಳು ವಿಷಯ ಸಂಗ್ರಹಣೆಯಲ್ಲಿ ಪ್ರಾಮುಖ್ಯ ಗಳಿಸುತ್ತಿವೆ. ಏಕೆಂದರೆ ಅನೇಕ ಲೇಖಕರು ಬರೆದ ಗ್ರಂಥಗಳಿಂದ ಮತ್ತು ಲೇಖನಗಳಿಂದ ಕೂಡಿದ ಗ್ರಂಥಾಲಯಗಳು ಅನುಷಂಗಿಕ ಸಾಮಗ್ರಿಯನ್ನು ಮಾತ್ರ ಒದಗಿಸುತ್ತವೆ. ಸಮೀಕ್ಷೆ ಮತ್ತು ಕ್ಷೇತ್ರ ಅಧ್ಯಯನಗಳು ಸಂಶೋಧಕರಿಗೆ ಮೂಲ ಸಾಮಗ್ರಿಯನ್ನೊದಗಿಸಿ ಸಂಶೋಧನೆಗೆ ಒಳಗಾದ ಮುನ್ಸೂಚನೆ, ಸಾರ್ವದೇಶಿಕ ಹಾಗೂ ಸಾರ್ವಕಾಲಿಕ ನಿಯಮಗಳ ರಚನೆ ಇವು ಸಾಧ್ಯವಾಗಿರುವುದು ಸಮೀಕ್ಷೆ ಮತ್ತು ಕ್ಷೇತ್ರ ಕಾರ್ಯಗಳಿಂದ.

ಸಮೀಕ್ಷೆ ಮತ್ತು ಕ್ಷೇತ್ರ ಅಧ್ಯಯನಗಳು ವೈಜ್ಞಾನಿಕ ಅನುಸಂಧಾನದ ಮುಖ್ಯ ವಿಧಾನಗಳಾಗಿವೆ. ಇವು ಆಧಾರಕಲ್ಪನೆಗಳ ಸತ್ಯಾಸತ್ಯತೆಗಳನ್ನು ಪರೀಕ್ಷಸುವುದಕ್ಕೂ ಸಾಮಾಜಿಕ ನಡವಳಿಕೆಗಳನ್ನು ಸಂಖ್ಯಾಕಲನಶಾಸ್ತ್ರೀಯ ಅನುಸಂಧಾನದ ಮೂಲಕ ವಿವೇಚಿಸುವುದಕ್ಕೂ ಅನುವಾಗಿ ಒದಗಿಬರುತ್ತದೆ. ಸಮೀಕ್ಷೆ ಮತ್ತು ಕ್ಷೇತ್ರ ಅಧ್ಯಯನಗಳ ನಡುವೆ ಕೆಲವು ತಾಂತ್ರಕ ವ್ಯತ್ಯಾಸಗಳುಂಟು. ಸಮೀಕ್ಷೆಯ ವಿಧಾನದಲ್ಲಿ ಕ್ಷೇತ್ರ ಬಹು ವ್ಯಾಪಕವಾದ್ದು. ತನ್ನ ಅಧ್ಯಯನಕ್ಷೇತ್ರಕ್ಕೊಳಪಡದ ಇತರ ಭಾಗಗಳನ್ನು ಅದು ಪ್ರತಿನಿಧಿಸುತ್ತದೆ. ಕ್ಷೇತ್ರ ಅಧ್ಯಯನಕ್ಕೆ ಪ್ರಾತಿನಿಧಿಕತೆಯಿಲ್ಲ. ಬದಲಾಗಿ, ಅದು ಒಂದು ನಿರ್ದಿಷ್ಟ ಕ್ಷೇತ್ರದ ಬಗ್ಗೆ ಆಳವಾದ ಅಧ್ಯಯನ ಮಾಡುವ ವಿಧಾನ. ಈ ವಿಧಾನದ ಅನುಸರಣೆಯಿಂದ ವ್ಯಕ್ತಿಶಃ ಸಂದರ್ಶನ ಮತ್ತು ಸಂಶೋಧನಕ್ಕೆ ಒಳಪಟ್ಟ ಸಮಸ್ಯೆಯ ಪರಿಪೂರ್ಣ ವಿವೇಚನೆ ಸಾಧ್ಯವಾಗುತ್ತವೆ.

ಕ್ಷೇತ್ರಕಾರ್ಯದಲ್ಲಿ ನಾಲ್ಕು ಹಂತಗಳುಂಟು: 1 ಪೂರ್ವಭಾವಿ ಯೋಜನೆ, 2 ರೂಪರೇಖೆಯ ಅಂತಿಮ ರಚನೆ, 3 ಕ್ಷೇತ್ರಕಾರ್ಯಾಚರಣೆ ಮತ್ತು 4 ವಿಷಯ ವಿಶ್ಲೇಷಣೆ ಮತ್ತು ನಿರೂಪಣೆ.

1 ಪೂರ್ವಭಾವಿ ಯೋಜನೆ: ಕ್ಷೇತ್ರ ಅಧ್ಯಯನಕ್ಕೆ ಇಳಿಯುವವನು ತಾನು ಮಾಡಬೇಕಾಗಿರುವ ಅಧ್ಯಯನದ ಬಗ್ಗೆ ಒಂದು ಪೂರ್ವಭಾವಿ ಯೋಜನೆಯನ್ನು ರಚಿಸುವುದು ಬಹಳ ಸಹಾಯಕವಾಗುತ್ತದೆ. ಕ್ಷೇತ್ರ ಅಧ್ಯಯನದ ವ್ಯಾಪ್ತಿ, ಉದ್ದೇಶಗಳು, ಅದಕ್ಕೆ ಬೇಕಾಗುವ ಸಮಯ, ಹಣಕಾಸು ಮತ್ತು ಸಿಬ್ಬಂದಿ-ಇವೇ ಮುಂತಾದವುಗಳ ಬಗ್ಗೆ ತಾತ್ಕಾಲಿಕ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಯೋಜನೆಯನ್ನು ವಿಶ್ವಾಸಾರ್ಹ ಆಧಾರಗಳ ಸಹಾಯದಿಂದ ರೂಪಿಸಲು ಸಾಧ್ಯವಿಲ್ಲದುದರಿಂದ ಕ್ಷೇತ್ರಕಾರ್ಯನಿರತ ವ್ಯಕ್ತಿಗಳು ಯಾವ ಪಕ್ಷಪಾತವೂ ಇಲ್ಲದೆ ವಾಸ್ತವ ಸಂಗತಿಯ ಕಡೆ ಗಮನ ಹರಿಸುವುದು ಮುಖ್ಯ ಕರ್ತವ್ಯ. ಅಧ್ಯಯನದ ಉದ್ದೇಶಗಳೇನೆಂಬ ದೃಷ್ಟಿಯಿಂದ ಕ್ಷೇತ್ರದ ಆಯ್ಕೆ ಮಾಡಿಕೊಳ್ಳಬೇಕು.

2 ರೂಪರೇಖೆಯ ಅಂತಿಮ ರಚನೆ: ಆರಿಸಿದ ಕ್ಷೇತ್ರದಲ್ಲಿ ಪೂರ್ವಭಾವಿ ಯೋಜನೆಗೆ ಅನುಸಾರವಾಗಿ ಅಧ್ಯಯನವನ್ನು ಮುಂದುವರಿಸಿದಂತೆ ಲಭ್ಯವಾಗುವ ನಂಬಲರ್ಹ ಆಧಾರಗಳಿಗೆ ಅನುಗುಣವಾಗಿ ಬಲವಾದ ಪೂರ್ವಭಾವಿ ಯೋಜನೆಯೇ ರೂಪರೇಖೆ. ಕ್ಷೇತ್ರ ಅಧ್ಯಯನದ ವ್ಯಾಪ್ತಿ, ಉದ್ದೇಶಗಳು, ಅಧ್ಯಯನಕ್ಕೆ ಬೇಕಾಗುವ ಹಣಕಾಸು, ಸಿಬ್ಬಂದಿ, ಕ್ಷೇತ್ರಕಾರ್ಯದ ವೇಳಾಪಟ್ಟಿ, ಇವೇ ಮುಂತಾದವು ಸ್ಪಷ್ಟವಾಗಿ ನಿರೂಪಿತವಾಗುತ್ತವೆ. ನಮಗೆ ಏನು ಬೇಕು, ನಾವು ಏನನ್ನು ನಿರೀಕ್ಷಿಸಬಹುದು ಮತ್ತು ನಾವು ಯಾವ ರೀತಿ ಕಾರ್ಯನಿರತರಾಗಬೇಕು ಎಂಬುದು ಖಚಿತವಾಗುತ್ತದೆ.

3 ಕಾರ್ಯಾಚರಣೆ: ಕ್ಷೇತ್ರ ಅಧ್ಯಯನವನ್ನು ನಡೆಸುವ ಸಂದರ್ಭದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಬಿಡಿಸುವುದು ಮೂರನೆಯ ಹಂತದ ಒಂದು ಹೆಜ್ಜೆಯಾಗಿದೆ. ಸಾಮಾನ್ಯವಾಗಿ ಈ ಸಮಸ್ಯೆಗಳು ಅನುಸಂಧಾನ ಅಥವಾ ವಿಷಯ ಸಂಗ್ರಹಣೆಯ ವಿಧಾನಗಳಿಗೆ ಸಂಬಂಧಪಟ್ಟಿರುತ್ತವೆ. ಒಂದು ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂಲ ವಿಷಯವನ್ನು ಸಂಗ್ರಹಿಸುವಾಗ ಕೆಳಗೆ ಕೊಟ್ಟಿರುವ ವಿಧಾನಗಳನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ. 1 ವೈಯಕ್ತಿಕ ಸಂದರ್ಶನ ವಿಧಾನ, 2 ಅನುಸೂಚಿ ವಿಧಾನ, 3 ಪ್ರಶ್ನಾವಳಿ ವಿಧಾನ.

ಕ್ಷೇತ್ರ ವಿಷಯವನ್ನು ಸಂಗ್ರಹಿಸಲು ವೈಯಕ್ತಿಕ ಸಂದರ್ಶನ ಒಂದು ಕ್ರಮಬದ್ಧ ವಿಧಾನ. ಒಂದು ಕ್ಷೇತ್ರಕ್ಕೆ ಸಂಬಂಧಪಟ್ಟ ಜನರನ್ನು ವೈಯುಕ್ತಿಕವಾಗಿ ಭೇಟಿ ಮಾಡಿ ವಿಷಯವನ್ನು ಸಂಗ್ರಹಿಸುವುದರಿಂದ ಅನೇಕ ವಾಸ್ತವಾಂಶಗಳು ಬೆಳಕಿಗೆ ಬರುತ್ತವೆ. ಉದಾಹರಣೆಗೆ: ಆರ್ಥಿಕ ಯೋಜನೆ ಮತ್ತು ಇತರ ಅಭಿವೃದ್ಧಿ ಪ್ರಯತ್ನಗಳ ಬಗ್ಗೆ ಜನರ ಮನೋಭಾವವನ್ನು ಸ್ಪಷ್ಟವಾಗಿ ತಿಳಿಯಬಹುದು. ಮೇಲಾಗಿ, ವೈಯಕ್ತಿಕ ಸಂದರ್ಶನ ನಡೆಸುವುದರಿಂದ ಒಂದು ಕ್ಷೇತ್ರದ ಆರ್ಥಿಕ ಸ್ಥಿತಿಗಳ ಮತ್ತು ಇತರ ಅಂಶಗಳ-ಇವು ಪ್ರಾಕೃತಿಕ, ಸಾಮಾಜಿಕ ಅಥವಾ ಆರ್ಥಿಕ ಅಂಶಗಳಾಗಿರಬಹುದು-ನಡುವೆ ಸಂಬಂಧ ಕಲ್ಪಿಸಬಹುದು. ಜನರ ಮನೋಭಾವಕ್ಕೆ ಅನುಗುಣವಾಗಿ ಕೇಳಿದ ಪ್ರಶ್ನೆಗಳಿಂದ ದೊರಕುವ ವಿಷಯ ವಿಶ್ವಾಸಾರ್ಹವಾದ್ದು. ಇದರಿಂದ ಲಭ್ಯವಾಗುವ ಸ್ವಂತ ಅನುಭವದ ಸಹಾಯದಿಂದ ಕಲ್ಪನೆಗಳ ಸತ್ಯಾಸತ್ಯತೆಗಳನ್ನು ಪರೀಕ್ಷಿಸುವುದು ಸುಲಭವಾಗುತ್ತದೆ.
ವೈಯಕ್ತಿಕ ಸಂದರ್ಶನದ ಜೊತೆಗೇ ಅನುಸೂಚಿಗಳನ್ನು ರಚಿಸಿ ಅವುಗಳ ಸಹಾಯವನ್ನು ಪಡೆಯುವುದು ಸಾಮಾನ್ಯವಾಗಿ ರೂಢಿಯಲ್ಲಿದೆ. ಅನುಸೂಚಿಗಳು ಸಂದರ್ಶನಕಾರ್ಯವನ್ನು ಒಂದು ಪರಿಮಿತಿಗೆ ಒಳಪಡಿಸಿ, ವಿಷಯ ಸಂಗ್ರಹಣೆಯಿಂದ ಕ್ಷೇತ್ರ ಅಧ್ಯಯನದ ಉದ್ದೇಶಗಳು ಪೂರೈಸಲು ನೆರವಾಗುತ್ತವೆ. ಸಂದರ್ಶನದಿಂದ ದೊರಕುವ ಮಾಹಿತಿಗಳನ್ನು ಅನುಸೂಚಿಗಳಲ್ಲಿ ಗುರುತು ಮಾಡಿಕೊಳ್ಳುವುದರಿಂದ ಅನಂತರ ವಿಶ್ಲೇóಷಣೆ ಕಷ್ಟವಾಗದು.

ಕ್ಷೇತ್ರದ ಜನರಿಗೆ ಅಂಚೆಯ ಮೂಲಕ ಪ್ರಶ್ನಾವಳಿಗಳನ್ನು ಕಳುಹಿಸಿ ವಿಷಯ ಸಂಗ್ರಹಿಸುವುದು ಮತ್ತೊಂದು ವಿಧಾನ. ಅಧ್ಯಯನ ನಡೆಸಬೇಕಾದ ಕ್ಷೇತ್ರ ವಿಸ್ತøತವಾಗಿದ್ದು, ಅಲ್ಲಿಯ ಜನರು ಸುಶಿಕ್ಷಿತರೆಂದು ಕಂಡುಬಂದಾಗ ಈ ವಿಧಾನವನ್ನು ಅನುಸರಿಸಲಾಗುತ್ತದೆ. ಸುಷ್ಠು ರೀತಿಯಲ್ಲಿ ರಚಿಸಲಾದ ಪ್ರಶ್ನಾವಳಿಗಳಿಂದ ಸಮರ್ಪಕವಾಗಿ ವಿಷಯ ಸಂಗ್ರಹಿಸಬಹುದು ಮತ್ತು ಶ್ರಮ, ಕಾಲ ಮತ್ತು ಲಹಣ ವ್ಯಯಗಳನ್ನೂ ಕಡಿಮೆ ಮಾಡಬಹುದು.

4 ವಿಷಯ ವಿಶ್ಲೇಷಣೆ ಮತ್ತು ನಿರೂಪಣೆ: ಇವು ಕ್ಷೇತ್ರ ಅಧ್ಯಯನದ ಅಂತಿಮ ಹಂತ. ದೊರಕಿರುವ ವಿವರಗಳನ್ನೆಲ್ಲ ವಿಶ್ಲೇಷಿಸುವುದರಿಂದ ಮುಂದಿರುವ ಸಮಸ್ಯೆಗಳನ್ನು ಬಿಡಿಸಿದಂತಾಗುತ್ತದೆ. ಇಲ್ಲವೆ ಆಧಾರಕಲ್ಪನೆಗಳನ್ನು ಪರೀಕ್ಷಿಸಿದಂತಾಗುತ್ತದೆ. ವಿಷಯ ವಿಶ್ಲೇಷಣೆ ಮತ್ತು ನಿರೂಪಣೆಯಲ್ಲಿ ಸಂಖ್ಯಾಕಲನಶಾಸ್ತ್ರದ ಸಹಾಯದಿಂದ ಹೆಚ್ಚು ನಿಖರತೆಯನ್ನು ಪಡೆಯಬಹುದು. ತತ್ಪರಿಣಾಮವಾಗಿ, ಕ್ಷೇತ್ರ ಅಧ್ಯಯನದ ಮುಖ್ಯ ಉದ್ದೇಶದ ಸಾಧನೆಯಾದಂತಾಗುತ್ತದೆ.

ಕ್ಷೇತ್ರ ಅಧ್ಯಯನದ ಕೆಲವು ಮಿತಿಗಳು: ಕ್ಷೇತ್ರ ಅಧ್ಯಯನದಲ್ಲಿ ಕೆಲವು ಮಿತಿಗಳಿವೆ. ಇವು ಸಾಮಾನ್ಯವಾಗಿ ವಿಷಯ ಸಂಗ್ರಹಣ ವಿಧಾನಗಳಲ್ಲಿ ಉಂಟಾಗುವ ಕೆಲವು ನ್ಯೂನತೆಗಳಿಂದ ಉದ್ಭವಿಸುವಂಥವು. ಸಂದರ್ಶಕರು ಕ್ಷೇತ್ರದ ಸ್ಥಿತಿಗತಿಗಳಿಗೆ ಹೊಂದಿಕೊಳ್ಳದಿರುವುದು, ಕ್ಷೇತ್ರದ ಜನರ ಮನೋಭಾವವನ್ನನುಸರಿಸಿ ಪ್ರಶ್ನೆಗಳನ್ನು ಕೇಳದಿರುವುದು, ಕ್ಷೇತ್ರ ಅಧ್ಯಯನದ ಉದ್ದೇಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡದಿರುವುದು ಮುಂತಾದವು ವೈಯಕ್ತಿಕ ಸಂದರ್ಶನ ವಿಧಾನವನ್ನು ವಿಫಲಗೊಳಿಸುತ್ತವೆ. ಇಂಥ ಸನ್ನಿವೇಶದಲ್ಲಿ ಸಂಗ್ರಹಿಸುವ ಮಾಹಿತಿಗಳಂತೂ ಸಂಶಯಾಸ್ಪದವಾಗಿರುತ್ತವೆ. ಅಸಮರ್ಪಕ ರೀತಿಯಲ್ಲಿ ರಚಿಸಲಾದ ಅನುಸೂಚಿಗಳು ಸಂದರ್ಶಕರನ್ನು ತಪ್ಪುದಾರಿಗೆ ಎಳೆದು ಇಡೀ ಕ್ಷೇತ್ರ ಅಧ್ಯಯನವನ್ನೇ ನಿಷ್ಪ್ರಯೋಜನಗೊಳಿಸುತ್ತವೆ. ಇದೇ ರೀತಿ, ಸ್ಥಳೀಯ ಭಾಷೆ, ಸರಳತೆ ಹಾಗೂ ಸ್ಪಷ್ಟತೆಗೆ ಗಮನ ಕೊಡದೆ. ಪ್ರಾಮುಖ್ಯಕ್ಕೆ ತಕ್ಕಂತೆ ಪ್ರಶ್ನೆಗಳನ್ನು ಜೋಡಿಸದೆ ಮತ್ತು ಕ್ಷೇತ್ರ ಅಧ್ಯಯನದ ಉದ್ದೇಶಗಳನ್ನು ಸ್ಪಷ್ಟಪಡಿಸದೆ ರಚಿಸಲಾಗುವ ಪ್ರಶ್ನಾವಳಿಗಳು ಕ್ಷೇತ್ರ ಅಧ್ಯಯನವನ್ನು ಫಲಪ್ರದಗೊಳಿಸಲಾರವು. ಕ್ಷೇತ್ರ ಕಾರ್ಯನಿರತರ ಆಲಸ್ಯ ಹಾಗೂ ಜಡತಾ ಮನೋಭಾವ, ಪಕ್ಷಪಾತ ಧೋರಣೆ, ಅಸಮರ್ಪಕ ವಿಷಯ ವಿಶ್ಲೇಷಣೆ ಮತ್ತು ನಿರೂಪಣೆ ಮುಂತಾದವು ಕ್ಷೇತ್ರ ಅಧ್ಯಯನವನ್ನು ನಿಷ್ಪ್ರಯೋಜಕವನ್ನಾಗಿ ಮಾಡುತ್ತವೆ.
ಕ್ಷೇತ್ರ ಅಧ್ಯಯನದಲ್ಲಿ ಮೇಲೆ ಹೇಳಿರುವ ಮಿತಿಗಳಿದ್ದಾಗ್ಯೂ ಸಂಶೋಧನ ಕಾರ್ಯದಲ್ಲಿ ಅದನ್ನು ಹೆಚ್ಚುಹೆಚ್ಚಾಗಿ ಉಪಯೋಗಿಸಲಾಗುತ್ತಿದೆ. ಕ್ಷೇತ್ರ ಅಧ್ಯಯನದಿಂದ ಅನೇಕ ಪ್ರಯೋಜನಗಳು ಲಭ್ಯವಾಗುತ್ತವೆ. ಮೇಲೆ ಹೇಳಿದ ಮಿತಿಗಳು ಅನಿವಾರ್ಯವೇನಲ್ಲ. ಕುಶಲರಾದ ಹಾಗೂ ತರಬೇತು ಪಡೆದ ವ್ಯಕ್ತಿಗಳನ್ನು ಸಂದರ್ಶಕರನ್ನಾಗಿ ನೇಮಿಸುವುದರಿಂದಲೂ ಅನುಸೂಚಿ ಮತ್ತು ಪ್ರಶ್ನಾವಳಿಗಳನ್ನು ಜಾಣ್ಮೆಯಿಂದ ರಚಿಸುವುದರಿಂದಲೂ ಕ್ಷೇತ್ರಕಾರ್ಯನಿರತರು ನಿಷ್ಪಕ್ಷಪಾತ ಧೋರಣೆಯನ್ನು ತಳೆಯುವುದರಿಂದಲೂ ಮೇಲಿನ ಮಿತಿಗಳನ್ನು ನಿವಾರಿಸಿ ಕ್ಷೇತ್ರ ಅಧ್ಯಯನವನ್ನು ಯಶಸ್ವಿಗೊಳಿಸಬಹುದು. ಯಶಸ್ವೀಕಾರ್ಯಾಚರಣೆಯಿಂದ ಸಂಶೋಧನ ಕ್ಷೇತ್ರದಲ್ಲಿ ಕ್ಷೇತ್ರ ಅಧ್ಯಯನದ ಮಹತ್ತ್ವ ಅಧಿಕಗೊಂಡಿರುವುದಲ್ಲದೆ ಸಾಮಾಜಿಕ ಶಾಸ್ತ್ರಗಳ ಅಭಿವೃದ್ಧಿಯನ್ನು ಸಾಧಿಸಲು ನೆರವಾಗಿವೆ. 					(ಜಿ.ಟಿ.ಎಚ್.; ಎಂ.ವಿ.ಜೆ.)
ಜಾನಪದ, ಸಮಾಜಶಾಸ್ತ್ರ ಹಾಗೂ ಭಾಷಾವಿಜ್ಞಾನ ವಿಭಾಗಗಳಲ್ಲಿ ಕ್ಷೇತ್ರಕಾರ್ಯ ಪರಿಚಯಕ್ಕೆ 
(ನೋಡಿ- ಕ್ಷೇತ್ರಕಾರ್ಯ-(ಜಾನಪದ))
(ನೋಡಿ- ಕ್ಷೇತ್ರಕಾರ್ಯ-(ಭಾಷಾವಿಜ್ಞಾನ)) 
(ನೋಡಿ- ಕ್ಷೇತ್ರಕಾರ್ಯ-(ಸಮಾಜಶಾಸ್ತ್ರದಲ್ಲಿ))